Thursday, June 16, 2011

ಯಾರಿಗೂ ಪುರುಸೊತ್ತಿಲ್ಲ

 The following is  an internet forward which i received from my friend. I don't know who the author is but it conveys the present day life and the way we are heading. Thanks for the person who has authored it. Its worth reading and introspect. 

ಯಾರಿಗೂ ಪುರುಸೊತ್ತಿಲ್ಲ. ಎಲ್ಲರೂ ಎಲ್ಲೆಲ್ಲಿದ್ದಾರೋ ಅಲ್ಲಲ್ಲಿಯೇ ಕಳೆದು ಹೋಗಿದ್ದಾರೆ. ಕಳೆದು ಹೋಗುವ  
ಅನಿವಾರ್ಯತೆಯನ್ನು ನಮಗೆ ನಾವೇ ಸೃಷ್ಟಿಸಿಕೊಂಡಿದ್ದೇವೆ. ಅಮ್ಮ, ಅಕ್ಕ, ತಂಗಿ, ಹೆಂಡತಿ, ಗೆಳೆಯರು -ಹೀಗೆ ಆತ್ಮೀಯರ ಜತೆ ನಾಲ್ಕು ಮಾತಿಗೆ ಬಿಝಿ ಷೆಡ್ಯೂಲ್ನಲ್ಲಿ ಸಮಯ ಹೊಂದಿಸಿಕೊಳ್ಳಲು ತಿಣುಕಾಡಬೇಕಾಗಿದೆ.
ಕೆಲಸಕ್ಕಾಗಿ ಬೆಂಗಳೂರಿಗೆ ಬಂದ ಹಳ್ಳಿ ಹುಡುಗ, ಆರಂಭದಲ್ಲಿ ಊರಿಗೆ ವಾರಕ್ಕೊಮ್ಮೆ ಹೋಗುತ್ತಿದ್ದ. ನಂತರ ಎರಡು ವಾರಕ್ಕೊಮ್ಮೆ, ಆಮೇಲೆ ತಿಂಗಳಿಗೊಮ್ಮೆ. ಅಮೇಲಾಮೇಲೆ ಮೂರು ತಿಂಗಳಿಗೊಮ್ಮೆ. ಕೊನೆಕೊನೆಗೆ ವರ್ಷಕ್ಕೊಂದು ಸಲ. ಮದುವೆಯಾದ ಮೇಲೆ ಊರು ಎಲ್ಲಿದೆ ಎಂಬುದೇ ಆತನಿಗೆ ನೆನಪಾಗುತ್ತಿಲ್ಲ. ಪ್ರತಿ ಶ್ರಾವಣ ಶನಿವಾರ ಮನೆ ದೇವರ ದೇಗುಲಕ್ಕೆ ಹೋಗುವುದನ್ನು ಆತ ತಪ್ಪಿಸುತ್ತಿರಲಿಲ್ಲ. ಆದರೀಗ ಮನೆ ದೇವರು ಸಹ ದೂರ.


ಬೆಂಗಳೂರಿನಂಥ ಮಾಯಾನಗರಿಗಳು ಎಲ್ಲರನ್ನೂ ಕರೆಕರೆದು ಕೆಲಸ ಕೊಡುತ್ತವೆ. ಮಾಯಾನಗರಿಯ ಸೆಳೆತದಲ್ಲಿ ವ್ಯತ್ಯಾಸಗಳೇ ಕಾಣಿಸುವುದಿಲ್ಲ. ನಮ್ಮತನವೇ ಸವೆದು ಹೋಗಿರುತ್ತದೆ. ಎಲ್ಲರಿಗೂ ಒಂದೇ ಸಮವಸ್ತ್ರ. ಒಂದೇ ಕೆಲಸ. ಭಾವನೆಗಳೇ ಇಲ್ಲದ ಯಾಂತ್ರಿಕ ಬದುಕುಎಂದು ಹೇಳಲು ಹೊರಟರೆ, ಅದೇ ಹಳೆಯ ಕೊರಗು ಎನ್ನುವಿರೇನೋ?
 
ಗಂಡ ಹೆಂಡತಿ ಜತೆ, ಮಕ್ಕಳು ಹೆತ್ತವರ ಜತೆ ಇಮೇಲ್ನಲ್ಲಿ, ಎಸ್ಎಂಎಸ್ಗಳಲ್ಲಿ ಮಾತಾಡುವ ಕಾಲವಿದು. ಮಗನ ಹುಟ್ಟುಹಬ್ಬವನ್ನು ಮೊಬೈಲ್ ನೆನಪಿಸುತ್ತದೆ. ಕೂಡಲೇ ಕರೆ ಮಾಡಿ, ಮಗನಿಗೆ ಹೂಗುಚ್ಛ ತಲುಪುವಂತೆ ಅಪ್ಪ ವ್ಯವಸ್ಥೆ ಮಾಡುತ್ತಾನೆ. ಹುಟ್ಟಿದ ಹಬ್ಬದ ದಿನವಾದರೂ ನನ್ನ ಜತೆ ಅಪ್ಪ ಕಾಲ ಕಳೆಯುತ್ತಾನೆ ಎಂದು ಭಾವಿಸುವ ಮಗನಿಗೆ, ದಿನವೂ ಯಾವುದೇ ವ್ಯತ್ಯಾಸ ಗೊತ್ತಾಗುವುದಿಲ್ಲ. ಯಾವುದೋ ಎಮರ್ಜೆನ್ಸಿ ಮೀಟಿಂಗ್, ಮುಗಿಯದ ಪ್ರಾಜೆಕ್ಟ್, ತಲೆತಿನ್ನುವ ಕೆಲಸಗಳು ಭಾವನೆಗಳನ್ನು ತಣ್ಣಗೆ ಕೊಲ್ಲುತ್ತದೆ.
ಮ್ಯಾನೇಜ್ಮೆಂಟ್ ಕಾಕದೃಷ್ಟಿ ತಪ್ಪಿಸಿಕೊಳ್ಳಲು ಗಾಣದ ಎತ್ತಿನಂತೆ ದುಡಿಯಲೇ ಬೇಕು. ಮಲ್ಯನ ರೇಸ್ ಕುದುರೆಗಳಂತೆ ದಣಿವನ್ನು ಮರೆತು ಓಡಲೇ ಬೇಕು. ಗುರಿಯಿಲ್ಲದ ಓಟ, ನಿರಂತರ. ಸ್ವಲ್ಪ ಏರುಪೇರಾದರೂ ಕೆಲಸಕ್ಕೆ ಕತ್ತರಿ. ಈಗಿನದು ಊರಿಗೆ ನೂರಾರು ಪದ್ಮಾವತಿಯರ ಕಾಲ. ನಮ್ಮ ಕುರ್ಚಿ ಅಲಂಕರಿಸಲು ದೊಡ್ಡದೊಂದು ಕ್ಯೂ ಆಗಲೇ ಹನುಮಂತಪ್ಪನ ಬಾಲದಂತೆ ಬೆಳೆದು ನಿಂತಿದೆ.
 
ಜಗದ ಸಂಕಷ್ಟಗಳನ್ನು ಅವುಗಳ ಪಾಡಿಗೆ ಬಿಟ್ಟು, ಎಲ್ಲವನ್ನೂ ಮರೆತು, ನಮಗೆ ಬೇಕಾದವರೊಂದಿಗೆ ಹೋಟೆಲ್ನಲ್ಲಿ ಕೂತು ಕಾಫಿ ಹೀರಿದ್ದು ಯಾವಾಗ? ಯಾವುದೋ ಪಾರ್ಕ್ನಲ್ಲಿ, ನಮ್ಮದೇ ಮೆಚ್ಚಿನ ತಾಣಗಳಲ್ಲಿ ಕೂತು ಅವರೊಂದಿಗೆ ನೆನಪುಗಳನ್ನು ಕೆದಕಿದ್ದು ಯಾವಾಗ? ಯಾವುದೋ ಮರೆತ ಹಳೆಯ ಹಾಡನ್ನು ತಪ್ಪು ತಪ್ಪಾಗಿಯೇ ಗುನುಗಿ, ಮಧುರಾನುಭೂತಿ ಹೊಂದಿದ್ದು ಯಾವಾಗ? ನೆನಪುಗಳು ತಿಂಗಳುಗಳನ್ನು ದಾಟಿ ವರ್ಷಗಳನ್ನು ಎಣಿಸುತ್ತವೆ.

ಅವನೆಲ್ಲೋ ಇವನೆಲ್ಲೋ? ಭೇಟಿ ನೆಪದಲ್ಲಿ ದೂರದ ಗೆಳೆಯ ಊರಿಗೆ ಬಂದರೂ ನಮಗೆ ಸಿಗುವುದೇ ಇಲ್ಲ. ಕನಸಲ್ಲಿ ಬಂದಂತೆ ಮಿಂಚಿ ಮಾಯವಾಗುತ್ತಾನೆ. ಊರಿಗೆ ಬಂದರೂ ಸೆಲ್ನಲ್ಲಿಯೇ ಆತ ಹೆಚ್ಚಾಗಿ ಸಿಗುತ್ತಾನೆ. ನೇರ ಸಿಕ್ಕರೂ ಸೆಲ್ನಲ್ಲಿಯೇ ಇರುತ್ತಾನೆ. ಯಾರಿಗೋ ಎಸ್ಸೆಮ್ಮೆಸ್ಗಳನ್ನು ಒಂದರ ನಂತರ ಒಂದರಂತೆ ಕಳುಹಿಸುತ್ತಾ, ನಾವು ಹೇಳಿದ್ದಕ್ಕೆ ತಲೆಯಾಡಿಸುತ್ತಿರುತ್ತಾನೆ! ಅವನು ಪಕ್ಕದಲ್ಲಿದ್ದರೂ, ದೂರದಲ್ಲಿದ್ದಂತೆ ಭಾವ. ಹಾಕಿಕೊಂಡಿದ್ದ ಯೋಜನೆಗಳು ಯಥಾ ಪ್ರಕಾರ ಮುಂದಿನ ಭೇಟಿಗೆ ವರ್ಗವಾಗುತ್ತವೆ. ಕೊನೆಗೆ ಊರು ಬಿಡುವ ವಿಷಯ ಸಹ ತಿಳಿಯುವುದಿಲ್ಲ.

ಒಂದೆರಡು ದಿನಗಳ ನಂತರ ಫೋನಲ್ಲಿಯೇಅದೇನಾಯ್ತು ಅಂದ್ರೆ..’ ಎಂದು ಆತ ನೆಪಗಳನ್ನು ಜೋಡಿಸಲು ಶುರು ಮಾಡುತ್ತಾನೆ. ಅವುಗಳನ್ನು ಒಪ್ಪದೇ ಅಥವಾ ನಂಬದೇ ಬೇರೆ ದಾರಿಯಾದರೂ ನಮಗಿದೆಯೇ?
ಚಿಕ್ಕ ಕನಸುಗಳನ್ನು ಕಾಣುವುದು ಅಪರಾಧಎಂದು ಎಲ್ಲೋ ಕೇಳಿದ ಮಾತು ತಲೆಯಲ್ಲಿ ಉಳಿದಿರುತ್ತದೆ. ‘ ನನಗೆ ಆಸೆಗಳಿಲ್ಲ. ತಿಂಗಳಿಗೆ ಕೇವಲ ೫೦೦೦ ರೂಪಾಯಿ ಸಿಕ್ಕರೆ ಸಾಕು. ನಾನು ಆನಂದದ ಬದುಕು ಕಟ್ಟಿಕೊಳ್ಳುತ್ತೇನೆಎನ್ನುತ್ತಿದ್ದ ಗೆಳೆಯನ ಸಂಬಳ ಈಗ ೫೦ ಸಾವಿರ. ಆದರೂ ಆತನಿಗೆ ಸಮಾಧಾನ ಇಲ್ಲ. ಸೈಕಲ್ ಸಾಕು ಎನ್ನುತ್ತಿದ್ದವಗೆ ಸ್ಕೂಟರ್ ಸಿಕ್ಕಿದೆ. ರಸ್ತೆಯಲ್ಲಿ ನಿಂತು, ಕಾರಿನ ಕನಸು ಕಂಡವನ ಮನೆಯಲ್ಲಿ ಎರಡೆರಡು ಕಾರುಗಳಿವೆ. ‘ಮಗಳ ಮದುವೆ ಮುಗಿದರೆ ನಾನು ಪುನೀತ. ತಲೆಮೇಲಿನ ಹೊರೆ ಇಳಿಸಿಕೊಂಡು ಹಗುರಾಗುತ್ತೇನೆಎನ್ನುತ್ತಿದ್ದ ಯಜಮಾನರು, ತಮ್ಮ ಮೊಮ್ಮಗಳಿಗೂ ಮದುವೆ ಮಾಡಿದ್ದಾರೆ. ಆದರೂ ಇವರ್ಯಾರಲ್ಲೂ ಸಂತೋಷ ಕೆನೆಕಟ್ಟಿಲ್ಲ.

ಆನಂದವನ್ನು ಬಿಟ್ಟು ನಾವು ಸುಖದ ಬೆನ್ನತ್ತಿರುವುದರಿಂದಲೇ ಹೀಗಾಗುತ್ತಿದೆ. ಆನಂದ ನೀಡುವ ಮೇಷ್ಟ್ರು ಕೆಲಸದತ್ತ ಯಾರಿಗೂ ಆಸಕ್ತಿಯಿಲ್ಲ. ಎಲ್ಲರಿಗೂ ಸಾಫ್ಟ್ವೇರ್ ಎಂಜಿನಿಯರ್ ಆಗುವ ಹಂಬಲ ಹೆಚ್ಚುತ್ತಿದೆಎನ್ನುವ ಟಿ.ಎನ್.ಸೀತಾರಾಂ ಮಾತು, ಇಲ್ಲಿ ಸುಮ್ಮನೇ ನೆನಪಾಗುತ್ತಿದೆ. ಮನೆ ಹತ್ತಿರದ ವರ್ಷದ ಪುಟಾಣಿ ಬಾಲಕಿಯನ್ನು ಮೊನ್ನೆ ಮಾತಾಡಿಸಿದೆ. ‘ದೊಡ್ಡವಳಾದ ಮೇಲೆ ಏನಾಗುತ್ತೀಯಾ?’ ಎಂಬ ಪ್ರಶ್ನೆಗೆ, ತಡವರಿಸದೇಡಾಕ್ಟರ್ ಆಗ್ತೀನಿ ಅಂಕಲ್ಎಂದಳು. ‘ಯಾಕೆ?’ ಎಂದರೆ, ‘ಚೆನ್ನಾಗಿ ದುಡ್ಡು ಸಂಪಾದಿಸುವುದಕ್ಕೆಅಂದಳು. ದೊಡ್ಡವರ ದುಡ್ಡಿನ ಮೋಹ ಮಕ್ಕಳ ರಕ್ತದಲ್ಲಿಯೂ ಬೆರೆಯುತ್ತಿದೆಯೇ?
ಮಧ್ಯೆ ಮದುವೆಗೆ ಬಾರದ ಗೆಳೆಯನೊಬ್ಬ ನಾನು ಬಯಸದಿದ್ದರೂ ಫೋನ್ನಲ್ಲಿ ವಿವರಣೆ ಕೊಡುತ್ತಿದ್ದ. ‘ಮದುವೆಗೆ ನೀನು ಬರಲಿಲ್ಲ ಎಂದು ನನಗೆ ಬೇಸರವಿಲ್ಲ. ಅಲ್ಲದೇ ನೀನು ಮದುವೆಗೆ ಬಂದೇ ನಮ್ಮಿಬ್ಬರ ಸ್ನೇಹವನ್ನು ಗಟ್ಟಿಗೊಳಿಸಬೇಕಿತ್ತು ಎಂದು ನಾನು ಭಾವಿಸಿಲ್ಲ. ಹೊಟ್ಟೆಪಾಡಿನ ಸರ್ಕಸ್ ಇದ್ದದ್ದೇ. ಕೆಲವು ಸಲವಾದರೂ ಅನಿವಾರ್ಯತೆಯ ಭೂತದಿಂದ ನಾವು ತಪ್ಪಿಸಿಕೊಳ್ಳಬೇಕು. ನೋಟಿನ ಮಸಿ ಕೈಗೆ ಅಂಟಿದರೆ ಪರವಾಗಿಲ್ಲ. ಮುಖಕ್ಕೆ ಅಂಟಬಾರದು. ನನ್ನ ಮದುವೆ ವಿಷಯ ಬಿಡು, ಅದೇನು ಲೋಕ ಕಲ್ಯಾಣದ ಕಾರ್ಯಕ್ರಮವಲ್ಲಎಂದು ಹೇಳಿ ಪೋನ್ ಕೆಳಗಿಟ್ಟೆ.

3 comments:

Anu said...

Indeed....I lazily lay around when I am in hassan , but when I come back its like leaving dream land and coming back to bizarre land.Very Nice post.

Anu
Cheers

Anonymous said...

Nice one...

Anonymous said...

Nice one...